Friday, January 16, 2009

ಧಕ್ಷ ಯಜ್ಞ

ಧಕ್ಷ ಯಜ್ಞ- ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರ ಸತಿ ನಾಟಕವನ್ನು ಧಕ್ಷ ಯಜ್ಞ ಎಂಬ ಹೆಸರಿನಲ್ಲಿ ಕೃಷ್ಣಮೂರ್ತಿ ಕವತ್ತಾರ್ ಅವರು ನಮ್ ಟೀಮ್ ತಂಡಕ್ಕಾಗಿ ನಿರ್ದೇಶಿಸಿದರು. ಈ ನಾಟಕವು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ೨೦೦೮ರ ಡಿಸೆಂಬರ್ ೧೪ರ ಸಂಜೆ ಪ್ರದರ್ಶನ ಕಂಡಿತು. ಬೆಂಗಳೂರಿನ ರಂಗಶಂಕರದಲ್ಲಿ ಜನವರಿ ೮ರ ಸಂಜೆ ಎರಡನೇ ಪ್ರದರ್ಶನ ನಡೆಯಿತು.

Sunday, January 4, 2009

ಮಳೆಬಿಲ್ಲು- ಮಕ್ಕಳ ನಾಟಕೋತ್ಸವ







ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರವು ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಮಳೆಬಿಲ್ಲು ಮಕ್ಕಳ ನಾಟಕೋತ್ಸವಕ್ಕೆ ನಮ್ ಟೀಮ್ ಸಹಭಾಗಿತ್ವ ನೀಡಿತ್ತು. ಈ ಉತ್ಸವದಲ್ಲಿ ೬ ನಾಟಕಗಳು ಪ್ರದರ್ಶನ ಕಂಡವು. ೨೦೦೮ ನವೆಂಬರ್ ತಿಂಗಳ ೧೮-೨೩ರ ವರೆಗೆ ಈ ಉತ್ಸವ ನಡೆಯಿತು.



ನೀನಾಸಂ ನಾಟಕೋತ್ಸವ- ೨೦೦೭


೨೦೦೭ನೇ ಸಾಲಿನ ನೀನಾಸಂ ನಾಟಕೋತ್ಸವ ಅಕ್ಟೋಬರ್ ತಿಂಗಳ ೧೨, ೧೩ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಕೆ.ವಿ. ಅಕ್ಷರ ನಿರ್ದೇಶನದಲ್ಲಿ ಸ್ವಯಂವರ ಲೋಕ ಹಾಗೂ ನಟರಾಜ ಹೊನ್ನವಳ್ಳಿ ನಿರ್ದೇಶನದ ನಟನಾರಾಯಣಿ ನಾಟಕಗಳು ಪ್ರದರ್ಶನಗೊಂಡವು.

Saturday, July 5, 2008

ಬಾಬಾ ಸಾಹೇಬ್ ಅಂಬೇಡ್ಕರ್


ಶಿವಮೊಗ್ಗದಲ್ಲಿ ಜುಲೈ ೫, ೨೦೦೮ರ ಸಂಜೆ ನಮ್ ಟಿಮ್ ಹಮ್ಮಿಕೊಂಡಿದ್ದ ಹೆಗ್ಗೋಡಿನ ಜನಮನದಾಟ ತಂಡದ ಬಾಬಾಸಾಹೇಬ್ ಅಂಬೇಡ್ಕರ್ ನಾಟಕದ ಒಂದು ದೃಶ್ಯ. ಎಲ್. ಮುಕುಂದರಾವ್ ಅವರು ಬರೆದ ಮೂಲ ಇಂಗ್ಲಿಷಿನ ಈ ನಾಟಕವನ್ನು ವೆಂಕಟರಮಣ ಎಯ್ತಾಳ ಅನುವಾದಿಸಿದ್ದಾರೆ. ನಿರ್ದೇಶನ, ಪರಿಕಲ್ಪನೆ, ಸಂಗೀತ, ರಂಗಸಜ್ಜಿಕೆ ಇಡಿ ತಂಡದ್ದು.
ನಾಟಕ ಪ್ರದರ್ಶನವನ್ನು ನಗರಸಭೆ ಅದ್ಯಕ್ಷ ಎಂ. ಶಂಕರ್ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಸಾಸ್ವೆಹಳ್ಳಿ ಸತೀಶ್, ಕೆ.ಎಸ್. ಚೇತನ್ ಸಮಾರಂಭದಲ್ಲಿ ಇದ್ದರು.

Monday, March 10, 2008

ಕಡಿದಾಳು ಶಾಮಣ್ಣ

ಸ್ವಾತಂತ್ರ್ಯಾನಂತರ ದೇಶ ಕಟ್ಟುವ ಆದರ್ಶದಲ್ಲಿ ತೊಡಗಿಕೊಂಡ ಕೆಲವು ಮನಸ್ಸುಗಳು ವಯಸ್ಕರ ಶಿಕ್ಷಣ, ಗ್ರಾಮ ನೈರ್ಮಲ್ಯ, ಪಾನನಿರೋಧ ಇತ್ಯಾದಿ ಬಹು ಜಟಿಲವಾದ ಕೆಲಸಗಳನ್ನು ಕೈಗೆತ್ತಿಕೊಂಡು ಹೊರಟವು. ಆ ಪೈಕಿ ಮಲೆನಾಡಿನ ಮೂಲೆಯ ಕಡಿದಾಳಿನಲ್ಲಿ ಜನ್ಮ ತಾಳಿದ ಶಾಮಣ್ಣ ವಿದ್ಯಾರ್ಥಿ ದೆಸೆಯಿಂದಲೇ ದೇಸೀ ಚಿಂತಕರಾಗಿ ಮೂಢನಂಬಿಕೆ ವಿರೋಧ, ಸರಳ ಮದುವೆ, ಬೇಸಾಯ ಹಾಗೂ ತನ್ನ ಸುತ್ತಮುತ್ತಲ ಜನರನ್ನು ತಮ್ಮ ಅಭಿರುಚಿಯತ್ತ ಸೆಳೆಯುವಲ್ಲಿ ಪಟ್ಟಪಾಡು ಈ ನಾಟಕದ ತಿರುಳು.
ಈ ದೇಶದಲ್ಲಿ ಬಹು ಕಷ್ಟಕರವಾದ ಜೀವನ ರೈತನದ್ದು. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತ ಸಂಘಟನೆಯಲ್ಲದೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ದುಸ್ತರ ಬದುಕಿಗೆ ತುತ್ತಾಗಿ, ಕಡೆಗೆ ಆತ್ಮಹತ್ಯೆ ಎಡೆಗೆ ಸಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ರೈತರನ್ನು ಸಂಘಟಿಸಿ ಅವರಲ್ಲಿ ಎಚ್ಚರ ಮೂಡಿಸಿ ಒಂದು ರಾಜಕೀಯ ಶಕ್ತಿಯಾಗಿ ರೂಪಿಸಲು ಹಗಲು ರಾತ್ರಿ ಶ್ರಮಿಸಿದ ಶಾಮಣ್ಣ, ತಮ್ಮ ನಿರ್ಭೀತ ಮಾತು ಮತ್ತು ಸ್ವಾತಂತ್ರಪ್ರಿಯ ನಡವಳಿಕೆಯಿಂದಾಗಿ ಅವಮಾನಿತರಾಗುತ್ತಾರೆ. ಇದು ರೈತ ಸಂಘದ ದೊಡ್ಡ ದುರಂತವಾಗಿ ಸಂಭವಿಸುತ್ತದೆ.
ಈ ನಾಟಕದ ದೇಸೀ ಚಿಂತಕ ಶಾಮಣ್ಣ ಸಮಕಾಲೀನ ಸಂದರ್ಭದಲ್ಲಿ ಒಬ್ಬ ವಿಸ್ಮಯಕರ ವ್ಯಕ್ತಿ. ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯಷ್ಟೇ ಮುಖ್ಯವಾದ ಚಟುವಟಿಕೆ ಎಂದರೆ ಸಂಗೀತ ಕಲಿಯುವುದು ಮತ್ತು ಬದುಕಿನ ಪ್ರಯೋಗಶೀಲತೆಯೇ ಮುಖ್ಯ ಎಂದು ನಂಬಿದವರು. ಆ ಕಾರಣಕ್ಕೆ ಇವರು ಶಾಲೆಯಿಂದ ಹೊರಗೆ ಕಲಿತದ್ದೇ ಹೆಚ್ಚು. ವಿದ್ಯಾರ್ಥಿ ದೆಸೆಯಲ್ಲೇ ಹಾರ್‍ಮೋನಿಯಂ, ತಬಲ, ಕೊಳಲು ಮತ್ತು ಸರೋದ್ ಕಲಿತ ಶಾಮಣ್ಣ ಸಂಸಾರಸ್ಥರಾದ ಮೇಲೆ ತಮ್ಮ ಸುತ್ತಲ ಜನರಿಗೆ ಫೋಟೋಗ್ರಫಿ ಕಲಿಸಿದರು. ಸಾರಾಯಿ ನಿಷೇಧ ಚಳುವಳಿ ಮಾಡಿ ಯಶಸ್ವಿಯಾದರು. ನಾಟಕ ಕಲಿಸಿದರು. ಮಕ್ಕಳಿಗೆ ಕುವೆಂಪು ಶಿಶುಗೀತೆ ಕಲಿಸಿದರು. ಜೊತೆಗೆ ರೈತರನ್ನು ಸಂಘಟಿಸಿದರು. ಇದೆಲ್ಲಾ ಇವರ ವಿರಾಟ್‌ರೂಪ ದರ್ಶನದ ಕೆಲವು ಉದಾಹರಣೆಗಳು.
ಆದರೆ ರೈತಸಂಘದವರು ಕೇವಲ ಹಸಿರು ಟವೆಲ್ ಕಸಿದುಕೊಂಡ ಹೋದ ಮಾತ್ರಕ್ಕೆ ಅವರ ಚೈತನ್ಯ ಉಡುಗಿ ಹೋಗಲಿಲ್ಲ. ಎಂದಿನಂತೆ ತಮ್ಮ ಚಟುವಟಿಕೆ ಮುಂದುವರೆಸಿದ್ದಾರೆ. ಇದನ್ನೆಲ್ಲಾ ಗಮನಿಸಿ ನಮ್ಮ ನಡುವೆ ಇರುವ ವ್ಯಕ್ತಿಯೊಬ್ಬರ ಕುರಿತು ನಾಟಕ ರಚನೆಯಾಗಿದೆ. ಬಹುಶಃ ನಮ್ಮ ನಡುವೆಯೇ ಇರುವ ವ್ಯಕ್ತಿಯೊಬ್ಬರ ಕುರಿತು ನಾಟಕವೊಂದು ಸಿದ್ಧವಾಗಿರುವುದು ಇದೇ ಮೊದಲು.

ಸಾಸ್ವೆಹಳ್ಳಿ ಸತೀಶ್

ವೃತ್ತಿಯಲ್ಲಿ ಶಿಕ್ಷಕರಾಗಿರುವ ಸಾಸ್ವೆಹಳ್ಳಿ ಸತೀಶ್ ಅವರಿಗೆ ರಂಗಭೂಮಿ ಚಟುವಟಿಕೆಯೇ ಪ್ರವೃತ್ತಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾಗಿರುವ ಮಲೆನಾಡಿನ ಕೇಂದ್ರ ಶಿವಮೊಗ್ಗದಲ್ಲಿ ನಡೆಯುತ್ತಿರುವ ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರಿಯರು. ಇದುವರೆಗೆ ಏಕಲವ್ಯ, ಕನಸಿನವರು, ಧನ್ವಂತರಿ ಚಿಕಿತ್ಸೆ, ದೇವರ ಹೆಣ, ಮದಗದ ಕೆಂಚವ್ವ, ಮೃತ್ಯು, ಕಡಿದಾಳು ಶಾಮಣ್ಣ, ಭಳಾರೆ ವಿಚಿತ್ರಂ! ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಗನ ಕಥೆ, ದೇವರ ಹೆಣ, ಕೆಂಡದ ಮಳೆ ಕರೆವಲ್ಲಿ ಉದಕವಾದವರ ಕಥೆ, ಸಂಸ್ಕಾರ, ಬೆಟ್ಟದಾಚೆ ಮುಂತಾದ ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ. ಹಲವು ನಾಟಕಗಳಲ್ಲಿ ಅಭಿನಯಿಸಿರುವುದಲ್ಲದೇ ‘ಕರ್ಣ’ ಹಾಗೂ ‘ದಾರಾಶಿಕೋ’ ಏಕವ್ಯಕ್ತಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಲವು ಬಾರಿ ಉತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. ೪೦ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ನಿರ್ದೇಶಿಸಿರುವ ಸತೀಶ್ ಅವರು ಪ್ರಸಾಧನ, ರಂಗಸಜ್ಜಿಕೆ, ಸಂಗೀತ ವಿಭಾಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಡಿದಾಳು ಶಾಮಣ್ಣ ನಾಟಕವನ್ನು ಅವರು ನಿರ್ದೇಶಿಸಿದ್ದಾರೆ.

ಬಿ. ಚಂದ್ರೇಗೌಡ

ಲಂಕೇಶ್ ಪತ್ರಿಕೆಯ ಬಯಲುಸೀಮೆ ಕಟ್ಟೆಪುರಾಣ ಅಂಕಣದ ಮೂಲಕ ಅಕ್ಷರ ಲೋಕಕ್ಕೆ ಚಿರಪರಿಚಿತರಾಗಿರುವ ಬಿ. ಚಂದ್ರೇಗೌಡ ಅವರು ನಾಟಕಕಾರರು, ಸಾಹಿತಿಗಳೂ ಹೌದು. ಬಯಲುಸೀಮೆ ಕಟ್ಟೆಪುರಾಣ, ಧನ್ವಂತರಿ ಚಿಕಿತ್ಸೆ, ಕಡಿದಾಳು ಶಾಮಣ್ಣ, ಗೌಸಣ್ಣನ ಗಣಪತಿ (ಅಚ್ಚಿನಲ್ಲಿದೆ) ನಾಟಕಗಳನ್ನು ರಚಿಸಿದ್ದು, ಮೊದಲ ಮೂರು ನಾಟಕಗಳು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಹತ್ತಾರು ಪ್ರದರ್ಶನಗಳನ್ನು ಕಂಡಿದೆ. ಸ್ವತಃ ನಟರೂ ಆಗಿರುವ ಚಂದ್ರೇಗೌಡರ ಕಾದಂಬರಿ, ಲಲಿತ ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ಅವ್ವ ಸೇರಿದಂತೆ ಹಲವು ಚಲನಚಿತ್ರಗಳ ಸಂಭಾಷಣಾಕಾರರೂ ಹೌದು.

Wednesday, March 5, 2008

ಅಂಧಯುಗ

ಇದು ಧರ್ಮವೀರ್ ಭಾರತೀ ಅವರ ‘ಅಂಧಾಯುಗ್’ ನಾಟಕದ ಕನ್ನಡ ರೂಪ. ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ತಿಪ್ಪೇಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಮಹಾಭಾರತ ಕುರುಕ್ಷೇತ್ರ ಯುದ್ಧದ ಹದಿನೇಳನೆ ದಿನದ ಸಾಯಂಕಾಲದಿಂದ ಬೆಳಗಿನವರೆಗೆ ನಡೆಯುವ ಘಟನೆಗಳೇ ಇಲ್ಲಿಯ ವಸ್ತು. ಗಾಂಧಾರಿ ಕೃಷ್ಣನಿಗೆ ನೀಡುವ ಶಾಪ ಕೇಂದ್ರಬಿಂದು. ಗಾಂಧಾರಿಯ ಆ ಶಾಪದ ಫಲ ಇಂದೂ ಸಮಾಜವನ್ನು ಕಾಡುತ್ತಿರುವ ಸೂಕ್ಷ್ಮತೆಯನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.
ಜಟಿಲವಾದ ಕಥಾಹಂದರವನ್ನು ಆದಷ್ಟೂ ಸರಳಗೊಳಿಸಿ ಅನಾವರಣಗೊಳಿಸುವ ಮೂಲಕ ‘ಅಂಧಯುಗ’ವನ್ನು ಹೆಚ್ಚು ಆಪ್ತವಾಗಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಸಾಂಪ್ರದಾಯಿಕ ರಂಗಭೂಮಿ, ಆಪ್ತ ರಂಗಭೂಮಿ ನಡುವೆ ಹೊಸದೊಂದು ಸಾಧ್ಯತೆಯ ಪ್ರಯೋಗವನ್ನು ಇಲ್ಲಿ ಮಾಡಲಾಗಿದೆ. ರಂಗದ ಮೇಲೆ ಬರುವ ಪಾತ್ರಗಳ ಜೊತೆಗೆ ರಂಗಸಜ್ಜಿಕೆಗಳೂ ಕೂಡ ಪಾತ್ರವಾಗುವುದು ಈ ಪ್ರಯೋಗದ ಒಂದು ಆಯಾಮ.
‘ಆ ದಿವಸ ಪೃಥ್ವಿಯಲಿ ಅವತರಿಸಿದ ಅಂಧಯುಗ ಮರಮರಳಿ ಬರುತಲಿದೆ. ನಮ್ಮ ನಡುವೆಯೇ ದೃತರಾಷ್ಟ್ರ, ಭೀಮ, ಧುರ್ಯೋಧನ, ಧರ್ಮರಾಯರು, ಸಂಜಯ, ವಿಧುರ ಕಾಣಸಿಗುತ್ತಾರೆ. ಅಶ್ವತ್ಥಾಮನ ಹಿಂಸೆ, ಸಂಜಯನ ಕುರುಡು, ಸಂಶಯ ಇಂದೂ ಕಾಡುತ್ತಿದೆ.’
ಹೀಗಾಗಿಯೇ ಅಂಧಯುಗ ಸಾರ್ವಕಾಲಿಕ. ಇಂಥ ಮಹತ್ವದ ಕೃತಿಯನ್ನು ರಂಗರೂಪಕ್ಕೆ ತರುವುದು ಸವಾಲಿನ ಸಂಗತಿಯೇ ಸರಿ. ‘ಅಂಧಯುಗ’ ಭಾರತೀಯ ನಾಟಕ ಸೃಷ್ಟಿಯ ಒಂದು ಅದ್ಭುತ. ಪ್ರೇಕ್ಷಕ, ನಟ, ನಿರ್ದೇಶಕರನ್ನು ನಿರಂತರ ಆಕರ್ಷಿಸುವ ಮಹಾಭಾರತದ ಯುದ್ಧದ ಮಹಾವಾಖ್ಯಾನವನ್ನು ನೀಡುವ ಕಾವ್ಯನಾಟಕ. ಸಾಹಿತ್ಯದ ಒಂದು ಅನುಭವ. ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಪ್ರಯೋಗ ಇದು.
ಹೊನ್ನಾಳಿ ಚಂದ್ರಶೇಖರ್, ಉಷಾ, ಮೈ.ನಾ. ಸುಬ್ರಹ್ಮಣ್ಯ, ನಾಗರಾಜ್, ಡಾ ಅರುಣ್, ವಿಜಯಕುಮಾರ್ ಪಾತ್ರಗಳಾಗಿ ರಂಗದ ಮೇಲೆ ಬರುತ್ತಾರೆ.

ಈ ನಾಟಕವು ಶಿವಮೊಗ್ಗದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹ್ಯಾದ್ರಿ ಉತ್ಸವ ಅಂಗವಾಗಿ ಏರ್ಪಡಿಸಿದ್ದ ರಂಗಸಹ್ಯಾದ್ರಿ ನಾಟಕೋತ್ಸವದಲ್ಲಿ ೨೦೦೮ರ ಫೆಬ್ರವರಿ ೧೦ರಂದು ಪ್ರದರ್ಶನಗೊಂಡಿತು.

ನಿರ್ದೇಶನ: ವೈದ್ಯ
ಬೆಳಕು: ಜಯರಾಂ
ವಸ್ತ್ರ, ಪ್ರಸಾದನ: ಗುರುಮೂರ್ತಿ ವರದಾಮೂಲ
ರಂಗಸಚ್ಚಿಕೆ: ಚಿಕ್ಕಮಠ್
ಸಂಗೀತ: ಟಿ.ವಿ. ಹೆಗಡೆ

Wednesday, January 2, 2008

ಭಳಾರೆ ವಿಚಿತ್ರಂ!




ನಾಡಿನ ಪ್ರಸಿದ್ಧ ಕತೆಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಂ. ವೀರಭದ್ರಪ್ಪ ಅವರ ಸಂಸ್ಕಾರ, ಬೆಟ್ಟದಾಚೆ, ದೇವರ ಹೆಣ ಕಥೆಗಳ ಜೊತೆಯಲ್ಲಿ ಕೆಲ ಬರಹಗಳನ್ನು ಇಟ್ಟುಕೊಂಡು ಈ ನಾಟಕವನ್ನು ರೂಪಿಸಲಾಗಿದೆ.
ಬಡತನ, ಹಸಿವು, ಶೋಷಣೆ ಹೇಗೆ ಒಂದಕ್ಕೊಂದು ಸ್ಫೂರ್ತಿ ಪಡೆದು, ಮೇಲಾಟಕ್ಕೆ ಇಳಿ ಮತ್ತೆಮತ್ತೆ ಸೋಲನ್ನು ಅನುಭವಿಸುತ್ತಿವೆ, ಈ ಸೋಲುಗಳು ತಮಗರಿವಿಲ್ಲದಂತೆ ವೈಯಕ್ತಿಕ ಮತ್ತು ಸಾಮೂಹಿಕ ಹೋರಾಟಗಳಾಗಿ ಮಾರ್ಪಟ್ಟು ದಿಕ್ಕೆಟ್ಟಿರುವ ಸಮಾಜವನ್ನು ಜಾಗೃತ ಸ್ಥಿತಿಯಲ್ಲಿ ಇಡಲು ಪ್ರಯತ್ನಿಸುತ್ತವೆ ಎಂಬುದನ್ನು ಈ ನಾಟಕ ಸೂಕ್ಷ್ಮವಾಗಿ ತೆರೆದಿಡುತ್ತದೆ.
ಅಕ್ಷರ ಜ್ಞಾನವಿದ್ದು, ಆರ್ಥಿಕವಾಗಿ ಪ್ರಬಲವಾಗಿರುವ ಒಂದು ವರ್ಗ ಅನಕ್ಷರಸ್ಥರನ್ನು, ವಿದ್ಯಾವಂತರನ್ನು ಜೊತೆಜೊತೆಗೆ ಮೋಸಗೊಳಿಸುತ್ತಾ ತಾನು ಮಾತ್ರ ಬದುಕಬೇಕೆನ್ನುವ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆನ್ನುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ, ಅದರಿಂದಾಗುತ್ತಿರುವ ಅನಾಹುತಗಳನ್ನು ಸರಳವಾದ ಘಟನೆಗಳ ಮೂಲಕ ನಾಟಕ ತಿಳಿಸುತ್ತದೆ.
ಹಸಿವಿನ ತೀವ್ರತೆ ಮನುಷ್ಯನನ್ನು ವ್ಯವಸ್ಥೆಯ ವಿರುದ್ಧ ಸಿಡಿದೇಳುವಂತೆ ಮಾಡುವ ಮೂಲಕ, ನಾಗರೀಕ ಸಮಾಜ ಮೇಲ್ನೋಟಕ್ಕೆ ಹರ್ಷದಾಯಕ, ಸಂತೋಷದಾಯಕ ಬದುಕು ಎಷ್ಟು ಪೊಳ್ಳು ಎಂಬುದನ್ನು ಈ ನಾಟಕ ಅನಾವರಣಗೊಳಿಸುತ್ತದೆ.
ಮುಖ್ಯವಾಗಿ ಕನ್ನಡ ಸಾಹಿತ್ಯದ ದೈತ್ಯ ಪ್ರತಿಭೆ ಕುಂ. ವೀರಭದ್ರಪ್ಪ ಅವರ ಜೀವನದ ಕೆಲ ಘಟನೆಗಳು ನಾಟಕದ ಓಟಕ್ಕೆ ಪೂರಕವಾಗಿ ನಿಲ್ಲುತ್ತವೆ.

ನಿರ್ದೇಶಕರು
ಭಳಾರೆ ವಿಚಿತ್ರಂ ನಾಟಕವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದಾರೆ. ಇದುವರೆಗೂ ಅವರು ಕಡಿದಾಳು ಶಾಮಣ್ಣ, ಧನ್ವಂತರಿ ಚಿಕಿತ್ಸೆ, ಏಕಲವ್ಯ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ನಟನೆಗೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ೪೦ಕ್ಕೂ ಹೆಚ್ಚು ನಾಟಕಗಳ ನಿರ್ದೇಶನ, ಪ್ರಸಾದನ, ರಂಗಸಜ್ಜಿಕೆ ಹೊಣೆಯನ್ನು ನಿರ್ವಹಿಸಿದ್ದಾರೆ.

ಪ್ರದರ್ಶನ
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜನವರಿ ೬, ೨೦೦೮ಕ್ಕೆ
ಬೆಂಗಳೂರಿನಲ್ಲಿ ನಡೆದ ರಂಗ ಪ್ರತಿಭೆ ನಾಟಕೊತ್ಸವದಲ್ಲಿ ಜನವರಿ ೮, ೨೦೦೮ಕ್ಕೆ.
ಬೆಳಗಾವಿಯಲ್ಲಿ ನಡೆದ ರಂಗ ಪ್ರತಿಭೆ ನಾಟಕೊತ್ಸವದಲ್ಲಿ ೨೦೦೮ರ ಫೆಬ್ರವರಿ ೧೯ಕ್ಕೆ.
ಮುಂಬಯಿಯ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ೨೦೦೮ರ ಮಾರ್ಚ್ ೨೧ಕ್ಕೆ.